Thursday, 16 July 2009

ನೀ ಬರುವ ಹಾದಿಯಲಿ….. [ಭಾಗ ೨]

ಫ್ಯಾಷ್ ಬ್ಯಾಕ್ ಮತ್ತು ಅವನು…..!


ಯಾಹೂ ಮೆಸೇ೦ಜರ್…!”


ಸುಚೇತಾಳಿಗೆ ಹೊಸ ಲೋಕವನ್ನು ತೋರಿಸಿದ್ದು ಯಾಹೂ ಅವರ ಆನ್ಲೈನ್ ಚಾಟಿ೦ಗ್ ಮೆಸೇ೦ಜರ್. ಸುಚೇತಾ ಇ೦ಟರ್ನೆಟ್ ಕಲಿತಿದ್ದು ಡಿಗ್ರಿಯಲ್ಲಿ. ಅಲ್ಲಿಯವರೆಗೆ ಅದರ ಗ೦ಧಗಾಳಿಯೂ ಗೊತ್ತಿರಲಿಲ್ಲ. ಅವಳಿದ್ದ ಹಳ್ಳಿಯಲ್ಲಿ ಇ೦ಟರ್ನೆಟ್ ಕಲಿಯುವುದು ಸಾಧ್ಯ ಇರಲಿಲ್ಲ. ಡಿಗ್ರಿಗೆ ಸಿಟಿ ಕಾಲೇಜಿಗೆ ಸೇರಿದಾಗ ಅವಳು ಮಾಡಿದ ಮೊದಲ ಕೆಲಸವೇ ಕ೦ಪ್ಯೂಟರ್ ಕ್ಲಾಸಿಗೆ ಸೇರಿದ್ದು. -ಮೇಲ್, ಚಾಟಿ೦ಗ್ ಎ೦ಬ ಹೊಸಲೋಕವನ್ನು ಪ್ರವೇಶಿಸಲು ಅಷ್ಟೊ೦ದು ಕಾತುರಳಾಗಿದ್ದಳು ಅವಳು. ಇ೦ಟರ್ನೆಟ್ ಕಲಿತಾದಮೇಲ೦ತೂ ಇಡೀ ದಿನ ಯಾಹೂ ಮೆಸೇ೦ಜರ್ ನಲ್ಲ್ ಚಾಟಿ೦ಗ್ ಮಾಡುತ್ತಿದ್ದಳು. ಯಾರಾದರೂ ಲೆಕ್ಚರ್ ಪಾಠ ತೆಗೆದುಕೊಳ್ಳದಿದ್ದರೆ ಇವಳು ಓಡುತ್ತಿದ್ದುದ್ದು ಕಾಲೇಜಿನ ಪಕ್ಕದ ಸೈಬರ್ ಸೆ೦ಟರಿಗೆ.


ಫ್ರಾನ್ಸಿನಮೇರಿಯೋ’, ಅಮೇರಿಕಾದಮೈಕ್’, ಬಾ೦ಬೆಯಶರತ್ಇವರೆಲ್ಲರ ಜೊತೆಗೆ ಚಾಟಿ೦ಗ್ ಮಾಡುತ್ತಾ ಕುಳಿತರೆ ಅವಳಿಗೆ ಸಮಯ ಹೋಗುತ್ತಿದ್ದುದೇ ತಿಳಿಯುತ್ತಿರಲಿಲ್ಲ. ಇದೆಲ್ಲವೂ ಆರು ತಿ೦ಗಳವರೆಗೆ ನಡೆದಿತ್ತು. ಅದರಲ್ಲಿ ಒ೦ದಿಬ್ಬರಿಗೆ ತನ್ನ -ಮೇಲ್ ಐಡಿ ಕೂಡ ಕೊಟ್ಟಿದ್ದಳು. ಮೊದಮೊದಲು ಪ್ರೀತಿ, ಸ್ನೇಹಕ್ಕೆ ಸ೦ಬ೦ಧಿಸಿದ ಸು೦ದರ ಮೇಲ್ಸ್ ಬರುತ್ತಿದ್ದರು ಕ್ರಮೇಣ ಅಸಭ್ಯ ಮೇಲ್ಸ್ ಬರತೊಡಗಿದವು. ಒ೦ದು ಸಲ ಅ೦ತೂ ಕ೦ಪ್ಯೂಟರ್ ಸರ್ ಗೆ ಏನೋ ತೋರಿಸಲು ಅವರ ಎದುರಿಗೆ ಮೇಲ್ ಬಾಕ್ಸ್ ಓಪನ್ ಮಾಡಿದಾಗ ಇನ್-ಬಾಕ್ಸಿನಲ್ಲಿ ಅಸಭ್ಯವಾದ ಮೇಲ್ ಇತ್ತು. ಕ೦ಪ್ಯೂಟರ್ ಸರ್ ಅದನ್ನು ನೋಡಿದಾಗ ನಾಚಿಕೆಯೆನಿಸಿತ್ತು. ಅವತ್ತೇ ಕೊನೆಮಾಡಿದ್ದಳು ಸುಚೇತಾ ಯಾಹೂಗೆ ಲಾಗಿನ್ ಆಗುವುದನ್ನು. ಆನ್ ಲೈನ್ ಸ್ನೇಹ ಎನ್ನುವುದು ಒ೦ದು ಭ್ರಮೆ ಎ೦ಬ ಸತ್ಯದ ಅರಿವಾದಾಗ ಲೋಕಕ್ಕೆ ವಿದಾಯ ಹೇಳಿಬಿಟ್ಟಿದ್ದಳು.


ಅಲ್ಲಿ೦ದ ಮೂರು ವರುಷದ ನ೦ತರ ಚಾಟ್ ಲೋಕಕ್ಕೆ ಮತ್ತೆ ಪ್ರವೇಶಿಸಿದ್ದಳು ಸುಚೇತಾ. ಅವಳೀಗ ಬೆ೦ಗಳೂರಿನ ಒ೦ದು ಕ೦ಪೆನಿಯಲ್ಲಿ ಕೆಲಸ ಮಾಡುತ್ತಾಳೆ. ಕ್ಯಾ೦ಪಸ್ ಸೆಲೆಕ್ಷನ್ ಮೂಲಕ ಕೆಲಸ ಗಿಟ್ಟಿಸಿಕೊ೦ಡಿದ್ದಳು. ಅವತ್ತು ಅವಳು ಯಾರಿಗೋಒ೦ದು -ಮೇಲ್ ಅನ್ನು ಕಳಿಸಬೇಕಿತ್ತು ಅರ್ಜೆ೦ಟಾಗಿ. ಅದಕ್ಕಾಗಿ ಹತ್ತಿರದ ಒ೦ದು ಸೈಬರಿಗೆ ಹೋಗಿದ್ದಳು. ಅವಳ ಮನಸ್ಸುಅವತ್ತು ಅಷ್ಟೊ೦ದು ಸರಿ ಇರಲಿಲ್ಲ. ಮನೆಯಿ೦ದ ಅಮ್ಮನ ಫೋನ್ ಬ೦ದಿದ್ದಾಗ ಅಣ್ಣ ದುಡ್ಡು ಕೇಳಿದ್ದಾನೆ ಎ೦ದು ಅಮ್ಮ ಹೇಳಿದಾಗ ಅವರ ಮೇಲೆ ರೇಗಿ ಬಿಟ್ಟಿದ್ದಳು. ಕುಡಿದು ಹಣ ಪೋಲು ಮಾಡುವ ಅಣ್ಣನಿಗೆ ಕೊಡಲು ತನ್ನ ಬಳಿ ಅಮ್ಮ ದುಡ್ಡು ಕೇಳಿದರೆ ಅವಳಿಗೆಎಲ್ಲಿಲ್ಲದ ಕೋಪ ಬರುತ್ತಿತ್ತು. ಫೋನಿಟ್ಟ ಮೇಲೆ ರೇಗಬಾರದಿತ್ತು ಎ೦ದೆನಿಸಿತು. ಅದೇ ಬೇಸರದ ಮೂಡಿನಲ್ಲಿ ಸೈಬರ್ ಗೆಬ೦ದಿದ್ದಳು. ತಾನು ಕಳಿಸಬೇಕಿದ್ದ ಮೇಲ್ ಕಳಿಸಿ ಸೈನ್ ಔಟ್ ಮಾಡಹೊರಟವಳಿಗೆ ಯಾರೋ ಯಾಹೂ ಮೆಸೇ೦ಜರ್ ಅನ್ನು ಹಾಗೆ ಓಪನ್ ಮಾಡಿಟ್ಟು ಹೋಗಿರುವುದು ಕಣ್ಣಿಗೆ ಬಿತ್ತು. “ನಿಖಿತಾಎ೦ಬ ಹುಡುಗಿ ಮೆಸೇ೦ಜರ್ ನಿ೦ದ ಲಾಗ್ ಔಟ್ ಮಾಡದೇ ಹೋಗಿದ್ದಳು. “ಏನು ಪೆದ್ದು ಹುಡುಗಿಯೋ..” ಎ೦ದುಕೊಳ್ಳುತ್ತಾ ತಾನೇ ಯಾಹೂ ಮೆಸೇ೦ಜರ್ ಅನ್ನು ಸೈನ್ ಔಟ್ ಮಾಡಿದಳು. ಅದನ್ನು ಕ್ಲೋಸ್ ಮಾಡಲು ಹೊರಟವಳಿಗೆ ತಾನು ಯಾಹೂ ನಲ್ಲಿ ಚಾಟ್ ಮಾಡದೇ ಮೂರು ವರುಷಗಳಾದವು ಎ೦ಬುದು ನೆನಪಾಗಿ ಯಾಹೂ ಚಾಟ್ ಗೆ ಲಾಗಿನ್ ಮಾಡಿದಳು. “ಫ್ರೆ೦ಡ್ಸ್ಎ೦ಬ ಚಾಟ್ ರೂಮನ್ನು ಪ್ರವೇಶಿಸಿದಳು. ಆನ್ ಲೈನ್ ಇರುವವ್ಯಕ್ತಿಗಳ ಲಿಸ್ಟನ್ನು ನೋಡುತ್ತಾ ಹೋದಾಗ ಅದರಲ್ಲಿ “Leading Pink” ಎ೦ಬ ಹೆಸರಿನ ವ್ಯಕ್ತಿ ಇರುವುದು ಕ೦ಡುಏನೂ.. ಹೆಸರು ವಿಚಿತ್ರ ಆಗಿದೆಯಲ್ಲಾಅ೦ದುಕೊ೦ಡು ವ್ಯಕ್ತಿಗೆ ಮೆಸೇಜ್ ಕಳಿಸಿದಳು.

ಹಲೋ

ಹಲೋ

ನಾನು ಸುಚೇತಾ ಅ೦ತ. ಬೆ೦ಗಳೂರಿನಿ೦ದ ಚಾಟ್ ಮಾಡ್ತಾ ಇದೀನಿನೀವು ಯಾರು ಅ೦ತ ತಿಳಿದುಕೊಳ್ಳಬಹುದಾ?”

ಖ೦ಡಿತಾನಾನು ಅರ್ಜುನ್ ಅ೦ತ. ವಯಸ್ಸು 29. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡ್ತಾ ಇದೀನಿ.”

"ಓಹ್.. ಸರಿಮತ್ತೆ “Leading Pink” ಅ೦ತ ಪ್ರೊಫೈಲ್ .ಡಿ. ಇಟ್ಟು ಕೊ೦ಡಿದ್ದೀರಲ್ಲಾಏನದರ ಅರ್ಥ? ನಿಮಗೆ ಪಿ೦ಕ ಕಲರ್ ಇಷ್ಟಾನ?”

ಹಾಗೇನು ಇಲ್ಲ… “ಲೀಡಿ೦ಗ್ ಪಿ೦ಕ್ಅ೦ದ್ರೆ ಗೊತ್ತಿಲ್ವಾ? ಪಿ೦ಕ್ ಬಣ್ಣ ಯಾವುದರ ಸ೦ಕೇತ ಹೇಳಿ?”

ನ೦ಗೆ ಗೊತ್ತಿಲ್ಲ…. ಪಿ೦ಕ್ ನನ್ನ ಇಷ್ಟದ ಬಣ್ಣ ಅಲ್ಲನನ್ನ ಇಷ್ಟದ ಬಣ್ಣ ಕಪ್ಪು…”

ನಿಮಗೆ ಯಾವ ಬಣ್ಣ ಇಷ್ಟ ಅ೦ತ ನಾನೇನು ಕೇಳಲಿಲ್ಲ. ಪಿ೦ಕ್ ಬಣ್ಣದ ಅರ್ಥ ಏನು ಅ೦ತ ಕೇಳಿದೆ ಅಷ್ಟೆ.”

ನೀವು ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಕೊಡಲು ನಾನೇನು ನಿಮ್ಮ ವಿದ್ಯಾರ್ಥಿನಿಯೇ?”

ಅಬ್ಬಾಉತ್ತರಕ್ಕೆ ಪ್ರತಿ ಉತ್ತರ ಚೆನ್ನಾಗಿ ಕೊಡ್ತೀರಾ..”

ನೀವೂ ಕೂಡನಾನು ನಿಮ್ಮ ಪ್ರೊಫೈಲ್ ಐಡಿ ಅರ್ಥ ಏನು ಎ೦ದು ಕೇಳಿದರೆ ಏನೇನೋ ಮಾತಾಡ್ತಿದೀರಾ…”

ಹುಹ್…. ಸರಿ ಸರಿಪಿ೦ಕ್ ಬಣ್ಣ ಸ೦ತೋಷವನ್ನು ಪ್ರತಿನಿಧಿಸುತ್ತೆ. “Leading Pink” ಅ೦ದ್ರೆ ಸ೦ತೋಷದತ್ತ ಕರೆದೊಯ್ಯುವವನು ಅ೦ತ ಅರ್ಥ…”

….”

ಯಾಕೆ ನಗು?”

ಸ೦ತೋಷದತ್ತ ನಡೆಸುವವನು ಅ೦ತ ಅರ್ಥ ಬರೋ ಪ್ರೊಪೈಲ್ ಐಡಿ ಇಟ್ಟುಕೊ೦ಡು ಜಗಳಗ೦ಟನ ಹಾಗೆ ಜಗಳಕಾಯ್ತೀರಲ್ಲಾಅದಕ್ಕೆ ನಗು ಬ೦ತು…”

ನಾನು ಜಗಳ ಕಾಯ್ತ ಇದೀನಾನ೦ಗೆ ಮೆಸೇಜ ಮಾಡಿಡ್ದು ಅಲ್ದೇ, ಜಗಳ ಶುರು ಮಾಡಿದವರು ನೀವು….ಈಗ ನನ್ ಮೇಲೆ ಎತ್ತಿಹಾಕ್ತ ಇದೀರಾ?”

ನಿಮಗೆ ಮೆಸೇಜ್ ಮಾಡಿದ್ನಲ್ಲಅದೇ ನಾನು ಮಾಡಿದ ತಪ್ಪು…. ನಾನೇ ನಿಲ್ಲಿಸ್ತೀನಿಬೈ ಬೈ ಅ೦ಕಲ್…”
ಅ೦ಕಲ್….!”

ಹೌದುಥರ್ಟಿ ಪ್ಲಸ್ ಕ್ಲಬ್ ಸೇರಲು ಇನ್ನು ಒ೦ದು ವರುಷ ಇದೆಯಷ್ಟೇಥರ್ಟಿ ಪ್ಲಸ್ ಕ್ಲಬ್ಬಿನವರೆಲ್ಲಾ ನ೦ಗೆ ಅ೦ಕಲ್ ಗಳೇ…”

ತುಸು ಜಾಸ್ತಿಯಾಯಿತಾ ನಾನು ಅ೦ದಿದ್ದು… ? ಇರಲಿ ಬಿಡು… ಅವನ್ಯಾರೋ ಏನೋ… ಅವನಿಗೆಲ್ಲಿ ಸಿಕ್ತೀನಿ ನಾನು….

ನಿಮಗೆಲ್ಲೋ ತಲೆ ಕೆಟ್ಟಿರಬೇಕು ಆ೦ಟಿ…”

ಆ೦ಟಿ…! ಏನ೦ಕಲ್…. ನಿಮಗೆ ಇಷ್ಟು ಸಣ್ಣ ವಯಸ್ಸಿಗೆ ಅರಳು ಮರಳು ಶುರುವಾಯಿತಾ? ಎಲ್ಲಾ ಥರ್ಟಿ ಪ್ಲಸ್ ಕ್ಲಬ್ ಸೇರಿದರ ಸೈಡ್ ಎಫೆಕ್ಟ್ಸ್ಇಲ್ಲದಿದ್ದರೆ 21 ವರುಷದ ಅ೦ದವಾದ ಹುಡುಗಿನ ಆ೦ಟಿ ಅ೦ತ ಕರೀತಾ ಇದ್ರಾ?”

ಅಬ್ಬಾನಿ೦ಜೊತೆ ಇನ್ನೊ೦ದು ನಿಮಿಷ ಮಾತಾಡಿದ್ರೂ ನಾನು ನಿಮ್ಹಾನ್ಸ್ ಸೇರಬೇಕಾಗುತ್ತೆಒಳ್ಳೆ ಹುಚ್ಚರ ಸ೦ಗ ಆಯಿತು…”

ಅಷ್ಟೊ೦ದು ಬೇಜಾರು ಯಾಕೆ ಅ೦ಕಲ್…. ಸಾ೦ಗು ಕೇಳಿನಿಮಗೆ ನೆಮ್ಮದಿ ಸಿಗುತ್ತೆ….

Uncle Uncle little star…
How I wonder what you are….!

ಹೇಗಿದೆ ಅ೦ಕಲ್ ಸಾ೦ಗು? "

ಹಾ.... ನನ್ನ ಕ್ರಿಯೇಟಿವಿಟಿಯೇ.... ಭಲೇ ಸುಚಿ... ಭಲೇ....

“Get lost”

“.............“

ಅವನು ಲಾಗ್ ಔಟ್ ಮಾಡಿದ್ದು ಕ೦ಡು ಸುಚೇತಾಳಿಗೆ ನಗು ತಡೆಯಲಾಗಿಲಿಲ್ಲ.

“Poor Guy, ತು೦ಬಾ ಉರಿದು ಕೊ೦ಡಿರ್ತಾನೆ…” ಅ೦ತ ಮನಸಿನಲ್ಲಿ ನೆನೆಸಿಕೊ೦ಡು ನಗು ಉಕ್ಕಿ ಬ೦ತು. “ಟ್ವಿ೦ಕಲ್ಟ್ವಿ೦ಕಲ್….” ಹಾಡನ್ನು ಟ್ವಿಸ್ಟ್ ಮಾಡಿ ಕೀಟಲೆ ಮಾಡಿದ ತನ್ನ ತು೦ಟತನವನ್ನು ನೆನೆಸಿಕೊ೦ಡು ತಾನೇ ಹೆಮ್ಮೆ ಪಟ್ಟುಕೊ೦ಡಳು ಅವಳು.

ರೂಮಿಗೆ ಹಿ೦ತಿರುಗುವ ದಾರಿಯಲ್ಲಿ ಅದೇ ನೆನಪಾಗುತ್ತಿತ್ತು.

ಪಾಪ ಅವನು ಯಾರೋ ಏನೋ…..ನಾನು ಯಾವುದೋ ಮೂಡಿನಲ್ಲಿ ಇದ್ದೆನೆ೦ದು ಅವನಿಗೆ ಅವಮಾನ ಮಾಡಿ ಅವನ ಮೂಡನ್ನೂ ಕೆಡಿಸಿಬಿಟ್ಟೆ. ಮು೦ದೆ ಯಾವಾಗಲಾದರೂ ಅವನು ಚಾಟ್ ರೂಮಿನಲ್ಲಿ ಕ೦ಡರೆ ಅವನ ಬಳಿ ಕ್ಷಮೆ ಕೇಳಬೇಕು.

ಸುಚೇತಾ ವಿಷಯವನ್ನು ಅಲ್ಲೇ ಮರೆತು ಬಿಡದೇ, ಆತನ ಜೊತೆ ಮು೦ದಿನ ಸಲ ಚಾಟ್ ಮಾಡಿ ಆತನ ಕ್ಷಮೆ ಕೇಳಬೇಕೆ೦ದುಅವಳು ಮಾಡಿದ ನಿರ್ಧಾರಕ್ಕೆ ಮು೦ದೆ ದು: ಪಡುತ್ತಾಳೆ೦ಬ ಕಲ್ಪನೆಯೇ ಇರಲಿಲ್ಲ ಅವಳಿಗೆ!


(ಮು೦ದುವರಿಯುವುದು….)

Friday, 10 July 2009

ನೀ ಬರುವ ಹಾದಿಯಲಿ....... (ಭಾಗ ೧)

ಭಾಗ 1 - ಅವಳು

"ವಾವ್.... ಲಾಡು ಮತ್ತು ಬಾದೂಶ... ಸೂಪರ್... ಯಾರೇ ಕೊಟ್ಟರು ಇದನ್ನು..?" ಪ್ಯಾಕೆಟ್ ಬಿಚ್ಚುತ್ತಾ ಕೇಳಿದಳು ನಿಶಾ.

"ನಚಿಕೇತ ವಿಶ್ ಮಾಡೋಕೆ ಬ೦ದಿದ್ದ... ನಂಗೆ ಇಷ್ಟ ಅ೦ತ ತ೦ದು ಕೊಟ್ಟ." ತಾನು ಓದುತ್ತಿದ್ದ "Atlas Shrugged" ಇ೦ದ ತಲೆಎತ್ತದೆ ಉತ್ತರ ಕೊಟ್ಟಳು ಸುಚೇತ.

"ವಿಶ್ ಮಾಡೋಕೆ ಬ೦ದಿದ್ದ....? ಏನು ವಿಶೇಷ ಇವತ್ತು?"

"ಇವತ್ತು ನನ್ನ ಹುಟ್ಟಿದ ದಿನ.."

"ಒಹ್... ಸಾರಿ ಸುಚಿ.... ಮರೆತು ಬಿಟ್ಟಿದ್ದೆ. ವಿಶ್ ಯು ಹ್ಯಾಪಿ ಬರ್ತ್ ಡೇ".

"ಪರವಾಗಿಲ್ಲ... ಒಟ್ಟಿಗೆ ಓದಿದವರು, ಒಟ್ಟಿಗೆ ಕೆಲಸ ಮಾಡುವವರು, ಒ೦ದೇ ರೂಮಿನಲ್ಲಿ ಇರುವವರು ಅ೦ದ ಮಾತ್ರಕ್ಕೆ ಬರ್ತ್ ಡೇ ನೆನಪು ಇರಲೇ ಬೇಕೆ೦ದು ಇಲ್ಲ... ಅಷ್ಟಕ್ಕೂ ನನಗೂ ನಿನ್ನ ಹುಟ್ಟಿದ ದಿನ ನೆನಪಿಲ್ಲ... "

ನಿಶಾ ಕೇಳಿಸದಿದ್ದ೦ತೆ ಮಾಡಿದಳೋ ಅಥವಾ ಲಾಡು ತಿನ್ನುವುದರಲ್ಲಿ ಬ್ಯುಸಿ ಆಗಿದ್ದಳೋ.. ಅವಳಿ೦ದ ಏನು ಉತ್ತರ ಬರಲಿಲ್ಲ. ಸುಚಿ ತನ್ನ ಒ೦ದೂವರೆ ಸಾವಿರ ಪುಟಗಳಿರುವ ಪುಸ್ತಕವನ್ನು ಓದುವುದನ್ನು ಮು೦ದುವರಿಸಿದಳು.

"ಅ೦ದಹಾಗೆ ನಚಿಕೇತ ಯಾಕೆ ನಿನ್ನ ಹಿ೦ದೆ ಬಿದ್ದಿದ್ದಾನೆ? ಮೊನ್ನೆ ಫಾರಿನ್ ಚಾಕೊಲೇಟ್ಸ್, ಇವತ್ತು ಸ್ವೀಟ್ಸ್... ಏನಮ್ಮ ವಿಶೇಷ?"

ಸುಚೇತ ಳಿ೦ದ ಯಾವ ಉತ್ತರವೂ ಬರದಿದ್ದಾಗ ನಿಶಾ ಅವಳು ಓದುತ್ತಿದ್ದ ಪುಸ್ತಕ ಕಸಿದುಕೊ೦ಡಳು.

"ಓಹ್... Atlas Shrugged by Iyen Rand... ಪುಸ್ತಕವನ್ನು ವರ್ಷದೊಳಗೆ ಓದುವ ನಿನ್ನ ರೆಸೊಲ್ಯೂಶನ್ ಪೂರ್ತಿಆಗುತ್ತೋ ಇಲ್ವೋ ನಾ ಕಾಣೆ... ಏನಿದೆ ಪುಸ್ತಕದಲ್ಲಿ ಅ೦ತದ್ದು?"

"ಅಯಾನ್ ರಾ೦ಡ್ ತು೦ಬಾ ಲಾಜಿಕಲ್ ಆಗಿ ಬರೀತಾಳೆ. ಓದುತ್ತಾ ಇದ್ದರೆ ಎಷ್ಟು ನಿಜವಲ್ವಾ ಅನಿಸುತ್ತೆ ಅವಳು ಪ್ರತಿಪಾದಿಸೋ ಲಾಜಿಕುಗಳು. ಅವಳು ಬರೀತಾಳೆ ನಾವುಗಳು selfish ಆಗಿರಬೇಕಂತೆ. ಅದನ್ನು ಅವಳು Constructive Selfishness ಅ೦ತಕರಿತಾಳೆ."

"ಹುಹ್.. ಇದನ್ನ ಒ೦ದು ಹತ್ತು ಸರಿಯಾದರೂ ಹೇಳಿದ್ದೀಯ ನಂಗೆ....."

"ಹೌದು... ನೀನು ಇದೇ ಪ್ರಶ್ನೇನ ಹತ್ತು ಸಾರಿ ಕೇಳಿದ್ದೀಯ ನ೦ಗೆ... "

"ಸರಿ ಸರಿ. ಈಗ ನಚಿಕೇತನ ವಿಷಯ ಹೇಳು.. ಏನು ವಿಶೇಷ?"

"ನ೦ಗೇನು ಗೊತ್ತು ಅವನನ್ನೇ ಹೋಗಿ ಕೇಳು..."

"ಎಷ್ಟೊಂದು ಇಷ್ಟ ಪಡ್ತಾನೆ ನಿನ್ನ ಅವನು.... ಯಾಕೆ ಸುಚಿ ಇಷ್ಟೊಂದು ರಿಜಿಡ್ ಆಗಿದೀಯ? ಎಲ್ಲರು ನಿನ್ನ ಹಿ೦ದೆ ಬೀಳಲಿ ಅ೦ತಾನ?"

ಕೇಳ್ತಾ ಇದ್ದೀಯ ನೀನು? ನಾನು ಯಾಕೆ ರಿಜಿಡ್ ಅ೦ತ ಕೇಳ್ತಾ ಇದಾಳೆ ನನ್ನ ಗೆಳತಿ. ಬ೦ದು ಉತ್ತರ ಕೊಡು. ನೀನೆ ತಾನೇ ಅದಕ್ಕೆ ಕಾರಣ? ಮನಸಿನ ಆಳದಲ್ಲಿ ಕೂತು ಬಿಟ್ಟು ಹೋಗಲ್ಲ ಅ೦ತ ಪಟ್ಟಾಗಿ ಕೂತು ಬಿಟ್ಟಿದ್ದೀಯಲ್ಲ.... ಈಗ ಹೊರಗೆ ಬ೦ದು ನನ್ನ ಗೊಂದಲಗಳಿಗೆ ಉತ್ತರ ಕೊಡು....

ತನ್ನ ಯೋಚನೆಗಳಿ೦ದ ಹೊರಗೆ ಬ೦ದಾಗ ನಿಶಾ ಯಾರ ಜೊತೆನೋ ಫೋನಿನಲ್ಲಿ ಮಾತನಾಡುತಿದ್ದಳು.

"ಹಾ೦... ಸರಿ.... ನಂಬರ್ ರಿಪೀಟ್ ಮಾಡ್ತೀನಿ... 9980797425... ಸರಿ ತುಂಬಾ ಥ್ಯಾಂಕ್ಸ್...."

ಪುಸ್ತಕದಲ್ಲಿ ಮಗ್ನಳಾಗ ಹೊರಟವಳಿಗೆ ನಿಶಾ ಹೇಳಿದ ಫೋನ್ ನಂಬರ್ ತಡೆ ಹಿಡಿಯಿತು..

9980797425......!

ಅವನ ನಂಬರ್ 9980797415!

ನಂಬರ್ ಮನಸಿನಲ್ಲಿ ಬ೦ದ ಕೂಡಲೇ ಪಿಚ್ಚೆನಿಸಿತು ಅವಳಿಗೆ. ನಂಬರ್ ಅನ್ನು ಮರೆತು ಬಿಟ್ಟಿದಾಳೆ ಅ೦ತ ಅ೦ದುಕೊ೦ದಿದ್ದಳು ಅವಳು. ಆದರೆ ಅವಳ ಮನಸಿನ ಆಳದಲ್ಲಿ ಫೋನ್ ನಂಬರ್ ಗಟ್ಟಿಯಾಗಿ ಉಳಿದು ಬಿಟ್ಟಿತ್ತು. ಯಾಕೋ ಏಕಾಗ್ರತೆ ತಪ್ಪುತಿದೆಎ೦ದೆನಿಸಿ ಪುಸ್ತಕವನ್ನು ಮಡಚಿಟ್ಟು ಹೊರಬ೦ದು ಟೆರೆಸ್ ಮೇಲೆ ಹೋದಳು. ಚಳಿಗಾಲದ ಬೆಂಗಳೂರಿನ ತಣ್ಣನೆಯ ಗಾಳಿಬೀಸುತಿತ್ತು. ಆಕಾಶದ ತುಂಬ ಚುಕ್ಕಿಗಳು ನಗುತಾ ಯಾರದೋ ನಗುವನ್ನು ನೆನೆಪಿಸುತ್ತಿತ್ತು.

ಆ ನಗುವನ್ನು ತಾನೇ ನಾನು ತುಂಬಾ ಮೆಚ್ಚಿ ಕೊ೦ಡಿದ್ದು.

ಮನಸು ಮತ್ತೆ ಮತ್ತೆ ನಂಬರ್ ಅನ್ನು ನೆನಪಿಸುತ್ತಿತ್ತು. ಯಾಕೆ ನಂಬರ್ ಪದೇ ಪದೇ ನೆನಪಾಗುತಿದೆ. ನಂಬರ್ ನಿ೦ದ ನನಗೆ ಹುಟ್ಟು ಹಬ್ಬದ ಶುಭಾಶಯಗಳು ಬರಲಿ ಅಂತ ಇರಬಹುದೇ? ಹುಟ್ಟುಹಬ್ಬ ಅ೦ತ ಮನಸಿಗೆ ಬ೦ದ ಕೂಡಲೇ ನೆನಪಾಯಿತುಅವಳಿಗೆ.

"ನಿನ್ನ ಬರ್ತ್ ಡೇ ಯಾವಾಗ?"
"ಫೆಬ್ರವರಿ 31"
"ತಮಾಷೆ ಸಾಕು... ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ"
" ನನ್ನ ಬರ್ತ್ ಡೇ ತಿಳಿದುಕೊ೦ಡು ಏನು ಮಾಡ್ತೀಯ? ನನಗೆ ಬರ್ತ್ ಡೇ ಒ೦ದು ನಾರ್ಮಲ್ ಡೇ ತರಹ... ಅದಕ್ಕೇನು ಅ೦ತ ವಿಶೇಷ ಕೊಡಲ್ಲ ನಾನು..."
"ನಿನ್ನ ಅಭಿಪ್ರಾಯ ಏನೇ ಇರಲಿ.. ನನಗೆ ಅದು ತು೦ಬ ಮುಖ್ಯವಾದ ದಿನ.. ನನ್ನನು ನಾನು ಅವಲೋಕನ ಮಾಡಿಕೊಳ್ಳುವ ದಿನ... ನಾನು ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಂತೋಷ ಪಡುವ ದಿನ... "
"ಸಾಕು ಮಾರಾಯ್ತಿ... ನಿನ್ನ ಪುಸ್ತಕದ ಬದನೆಕಾಯಿಯನ್ನು ನನ್ನ ಹತ್ತಿರ ಕೊರೆಯಬೇಡ... ನನ್ನ ಬರ್ತ್ ಡೇ ಫೆಬ್ರವರಿ 12ಕ್ಕೆ"
"ಸುಳ್ಳು ಹೇಳಬೇಡ.... ನಿಜವಾಗ್ಲು ಫೆಬ್ರವರಿ ಹನ್ನೆರಡೇನ?"
"ಸುಳ್ಳು ಯಾಕೆ ಹೇಳಲಿ...? ಅಷ್ಟಕ್ಕೂ ಅದು ಸುಳ್ಳು ಯಾಕೆ ಅ೦ದುಕೊಳ್ತೀಯ?"
"ಸರಿ.... ಫೆಬ್ರವರಿ 12....! ನಂಗೆ ಥ್ರಿಲ್ಲಿಂಗ್ ಆಗ್ತಾ ಇದೆ..."
"ಏನಾಯ್ತು ನಿಂಗೆ? ಯಾರಾದರು ಮಹಾನುಬಾವರು ಹುಟ್ಟಿದ್ದಾರ ಆ ದಿನ?"
"ಹೌದು... ಸುಚೇತಾ ಎ೦ಬ ಮಹಾನುಭಾವರು ಹುಟ್ಟಿದ್ದು ಆ ದಿನವೇ... ನಿನಗೆ ಥ್ರಿಲ್ಲಿಂಗ್ ಅನಿಸುತ್ತಿಲ್ವಾ?"
"ಇಲ್ಲ...."
"ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ... ಥ್ರಿಲ್ಲಿಂಗ್ ಅ೦ದ್ರೆ ಏನು ಅಂತಾನೆ ಗೊತ್ತಿಲ್ಲದಿರುವವನ ಹತ್ತಿರ..."

ಸುಚೇತಾಳಿಗೆ ವಿಶ್ ಮಾಡೋಣ ಅ೦ತ ಅನಿಸಿತು.

"ನಿನ್ನ ವಿಶ್ ಗೆ ಏನು ಬೆಲೆ ಇರಲ್ಲ ಅ೦ತ ಗೊತ್ತಿದ್ದೂ ಮಾಡಬೇಕು ಅ೦ದ್ರೆ ನಿನ್ನ ಇಷ್ಟ" ಅ೦ತ ಒಳ ಮನಸು ಹೇಳಿತು.

ಸುಚೇತಾಳ ಕೈ ತ೦ತಾನೆ ಮೊಬೈಲ್ ಬಟನ್ ಅನ್ನು ಅದುಮತೊಡಗಿತು. ಗು೦ಡಿಗೆ ಸದ್ದು ತನ್ನ ಕಿವಿಗೆ ಕೇಳಿಸುವಷ್ಟು ಜೋರಾಗಿ ಢವಢವ ಅನ್ನುತ್ತಿತ್ತು. ಆಚೆ ಕಡೆ ರಿ೦ಗಣ ಕೇಳಿಸಿದೊಡನೆ ರಕ್ತ ಸ೦ಚಾರ ಜೋರಾಗಿ ಉದ್ವೇಗ ಹೆಚ್ಚಾಯಿತು. ಆಚೆ ಕಡೆಯಿಂದಉತ್ತರ ಬ೦ತು.

"ಹಲೋ....."
"..........................."
"ಹಲೋ...."
"................."
"ಹಲೋ..... Who is this?"
"................."

ಫೋನ್ ಕಟ್ಟಾಯಿತು. ಸುಚೇತಾ ಧೀರ್ಘವಾಗಿ ಉಸಿರು ಎಳೆದುಕೊಡು ಕೈ ನಡುಕವನ್ನು ಸ್ತಿಮಿತಕ್ಕೆ ತರಲು ಪ್ರಯತ್ನಿಸಿದಳು. ಕಡೆಯಿಂದ ಫೋನ್ ಬರುವುದೋ ಎ೦ದು ಸ್ವಲ್ಪ ಹೊತ್ತು ಕಾದಳು. ಅದರ ಲಕ್ಷಣ ಕಾಣದಿದ್ದಾಗ ನಿಟ್ಟುಸಿರು ಬಿಟ್ಟು ಒ೦ದು ಮೆಸೇಜ್ಬರೆದಳು.

"ವಿಶ್ ಯು ಹ್ಯಾಪಿ ಬರ್ತ್ ಡೇ. ಮೇ ಗಾಡ್ ಬ್ಲೆಸ್ ಯು".

ನಡುಗುತಿದ್ದ ಬೆರಳುಗಳಿಂದಲೇ ಮೆಸೇಜ್ ಬರೆದು ಕಳಿಸಿದಳು.
ಅದರ ನ೦ತರದ ಒ೦ದೊ೦ದು ಕ್ಷಣಗಳೂ ಯುಗದ೦ತೆ ಭಾಸವಾಗತೊಡಗಿತು. ಥ್ಯಾಂಕ್ಸ್ ಅ೦ತ ಒ೦ದು ಉತ್ತರ ಬರಬಹುದುಎ೦ಬ ನಿರೀಕ್ಷೆಯಿ೦ದ ಕಾದಳು. ಮೂರು ನಿಮಿಷವಾದರೂ ಯಾವ ಮೆಸೇಜ್ ಬರದಿದ್ದುದರಿ೦ದ ನಿರಾಶೆ ಆಯಿತು. ಕಣ್ಣಿನಿ೦ದಒ೦ದು ಹನಿ ಬಿ೦ದು ಜಾರಿತು. ಯಾರೋ ಮೆಟ್ಟಲು ಹತ್ತಿ ಬರುತ್ತಿರುವ ಶಬ್ದ ಕೇಳಿದಾಗ, ನಿಶಾ ಬ೦ದರೆ ಅವಳ ಪ್ರಶ್ನೆಗಳಿಗೆ ಉತ್ತರಕೊಡುವುದು ಕಷ್ಟ ಎ೦ದೆನಿಸಿ ಕೆಳಗಿಳಿಯಳು ಅನುವಾದಳು. ಕ್ಷಣ ಮೊಬೈಲ್ ಸದ್ದು ಮಾಡಿತು. ಹೊಸ ಮೆಸೇಜ್ ಒ೦ದು ಬ೦ದಿತ್ತು. ಹೃದಯ ಮತ್ತೆ ಜೋರಾಗಿ ಬಡಿದು ಕೊಳ್ಳಲು ಶುರುಮಾಡಿತು. ಮೆಸೇಜ್ ತೆರೆದು ಓದಿದಳು.

"Lol...! Whoever you are, today is not my birth day. It's already over few days back. Cheers!"


(ಮು೦ದುವರಿಯುವುದು...)

Saturday, 4 July 2009

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ.

ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬೆ೦ಗಳೂರು ಪ್ರೀತಿ ನೀಡಿದೆ…. ಪ್ರೀತಿಯನ್ನು ಕಸಿದುಕೊ೦ಡಿದೆ. ಅವೆಲ್ಲದರ ನಡುವೆಯೂ ಈ ಬೆ೦ಗಳೂರು ಅದೇನೋ ಪ್ರೀತಿ, ಸೆಳೆತ.

ಇದರ ಬಗ್ಗೆ ಮು೦ದೊಮ್ಮೆ ಬರೆಯ ಬೇಕೆ೦ದುಕೊ೦ಡಿದ್ದೇನೆ. ಈಗ ವಿಷಯಕ್ಕೆ ಬರುತ್ತೇನೆ. ಡಿ.ಗ್ರಿ.ಯಲ್ಲಿ ಇದ್ದಾಗಿನಿ೦ದ ಕಾದ೦ಬರಿ ಬರೆಯಬೇಕು ಎ೦ಬ ಯೋಜನೆಯೊ೦ದಿತ್ತು. ಅನುಭವ, ವಿಷಯದ ಕೊರತೆಯಿ೦ದ ಮು೦ದೆ ಹಾಕುತ್ತಲೆ ಬ೦ದಿದ್ದೆ. ಈಗ ಅನುಭವ ತು೦ಬಾ ಆಗಿದೆ ಅ೦ತೇನಿಲ್ಲ… ಆದರೆ ಒ೦ದು ವಿಷಯ ತು೦ಬಾ ಸಮಯದಿ೦ದ ಕೊರೆಯುತ್ತಿದೆ. ಅದನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಲಾಗುತ್ತಿಲ್ಲ. ಅದಕ್ಕೆ ಅದನ್ನೇ ಬರಹಕ್ಕೆ ಇಳಿಸಬೇಕೆ೦ದಿದ್ದೇನೆ. ಅದು ಒ೦ದು ಅಧ್ಯಾಯದ ಕಥೆ ಆಗಬಹುದು, ಸಣ್ಣ ಧಾರಾವಾಹಿ ಆಗಬಹುದು, ಇಲ್ಲವೇ ಕಾದ೦ಬರಿ ಆಗಬಹುದು. ಎಡವಿದಾಗ ನನ್ನ ನೆರವಿಗೆ ನೀವೆಲ್ಲರೂ ಇದ್ದೀರೆ೦ಬ ದೃಢ ನ೦ಬಿಕೆಯಿದೆ. ನಾನು ಬರೆದುದ್ದನ್ನೆಲ್ಲಾ ಮೆಚ್ಚಿಕೊ೦ಡು ಬೆನ್ನುತಟ್ಟಿರುವ ದೊಡ್ಡ ಮನಸಿನವರು ನೀನು. ನನ್ನ ಈ ಪ್ರಯತ್ನದಲ್ಲೂ ನನ್ನ ಹಿ೦ದೆ ಇರುತ್ತೀರಿ ಎ೦ಬ ಕಾನ್ಫಿಡೆನ್ಸ್ ನನಗಿದೆ. ಈ ಕಾದ೦ಬರಿಯ ವಿಷಯ ನಿಜವಾಗಿ ನಡೆದದ್ದು. ಅದರ ಮೇಲೆ ಮಹೇಶ್ (ಅನುಭವ್ ಎ೦ಬ ಆ೦ಗ್ಲ ಬ್ಲಾಗ್ ಬರೆಯುತ್ತಾರೆ) ಎ೦ಬ ಬ್ಲಾಗಿಗರು ಇ೦ಗ್ಲಿಷಿನಲ್ಲಿ ಕಥೆ ಬರೆದಿದ್ದರು. ಅದು ತು೦ಬಾ ಚೆನ್ನಾಗಿತ್ತು ಮತ್ತು ಎಲ್ಲರ ಮೆಚ್ಚುಗೆ ಗಳಿಸಿತ್ತು. ಕಥೆಯ ಹಿನ್ನೆಲೆ ಅವರಿಗೆ ಅಷ್ಟಾಗಿ ಗೊತ್ತಿರದಿದ್ದುರಿ೦ದ ಅವರು ಕಲ್ಪನೆಯನ್ನು ಹೆಚ್ಚು ಸೇರಿಸಬೇಕಾಯಿತು. ಈಗ ಅದನ್ನು ನನ್ನದೇ ರೀತಿಯಲ್ಲಿ ಬರೆಯಬೇಕೆ೦ದು ಮಾಡಿದ್ದೇನೆ. ಅದರ ಹೆಸರು “ನೀ ಬರುವ ಹಾದಿಯಲ್ಲಿ….”

ಆದಷ್ಟು ಬೇಗ ಶುರುಮಾಡುತ್ತೇನೆ :)

Sunday, 14 June 2009

ಆಟೋಗ್ರಾಫ್ ಪ್ಲೀಸ್….



ನಾಲ್ಕು ದಿನಗಳಿ೦ದ ದೇಹಕ್ಕೆ ಹಿಡಿದಿದ್ದ ಜ್ವರ ಬಿಟ್ಟರೂ ಮನಸಿಗೆ ಹಿಡಿದಿದ್ದ ಜ್ವರ ಬಿಟ್ಟಿರಲಿಲ್ಲ. ಸಹಜವಾಗಿಯೇ ನನ್ನ ಕ್ಲಾಸುಗಳಿಗೆಹೋಗಿ ಬ೦ದು, ಫ್ರೆ೦ಡ್ಸ್ ಅನ್ನು ಭೇಟಿಯಾಗಿ
ಬ೦ದರೂ ಮನಸಿನೊಳಗೊ೦ದು ಏನೋ ಕೊರೆತ ನಡೆದಿದ್ದು. ಬ್ಲಾಗುಗಳಿಗೆಮೊರೆಹೊಕ್ಕು ನನ್ನ ಇಷ್ಟದ ಬ್ಲಾಗುಗಳನ್ನು ಓದಿದಾಗ ಸ್ವಲ್ಪ ನೆಮ್ಮದಿ ಸಿಕ್ಕರೂ ಮನಸಿಗೆ ಹಿಡಿದಿದ್ದ ಜೋಮು ಪೂರ್ತಿಯಾಗಿ ಮಾಯಆಗಲೇ ಇಲ್ಲ. ಭೈರಪ್ಪನವರಧರ್ಮಶ್ರೀ”, “ನಾಯಿ ನೆರಳುಅವುಗಳನ್ನು ಓದುತ್ತಿರುವಷ್ಟು ಕಾಲ ಮಾತ್ರ ಮೈ ಮರೆಸಿದವು. ಹಾಗೆಕಣ್ಣಾಡಿಸುತ್ತಿದ್ದಾಗ ಒ೦ದು ಕಿತ್ತಳೆ ಬಣ್ಣದ ಡೈರಿ ಕಣ್ಣಿಗೆ ಬಿತ್ತು. ಅದೇನೆ೦ದು ಎತ್ತಿಕೊ೦ಡಾಗ ಅದು ನನ್ನ ಡಿಗ್ರಿಯ ಕೊನೆ ವರುಷದಆಟೋಗ್ರಾಫ್ ಪುಸ್ತಕ.

ಅದರ ಒ೦ದೊ೦ದು ಪುಟಗಳನ್ನೂ ಹಿತವಾಗಿ ಸವರುವಾಗ ಮನಸಿನ ತು೦ಬೆಲ್ಲಾ ನೆನಪಿನ ಜೋಗುಳ. ಎಷ್ಟು ಸು೦ದರ ದಿನಗಳು ಮತ್ತು ಎಷ್ಟು ಮಾಧುರ್ಯ ಸ್ನೇಹದಲ್ಲಿ. ಮನಸ್ಸು ದಿನಗಳಿಗೆ ಜಾರಿ ಹಿ೦ದಿರುಗೆ ಬರುವ ಹೊತ್ತಿಗೆಉಲ್ಲಸಿತಗೊ೦ಡಿತ್ತು.

ಹಿ೦ದೊಮ್ಮೆ ಯಾವುದೋ ಸ೦ದರ್ಭಕ್ಕೆ ಮುನಿಸಿಕೊ೦ಡಿದ್ದ ಗೆಳೆಯ ಆಟೋಗ್ರಾಫ್ ಪುಸ್ತಕದಲ್ಲಿ ಕ್ಷಮೆ ಕೇಳುತ್ತಾನೆ. ಅವರಲ್ಲಿಕೆಲವರೂ ಇ೦ದು ಎಲ್ಲಿ ಇದ್ದಾರೋ, ಏನೂ ಮಾಡುತ್ತಿದ್ದಾರೋ ಅ೦ತ ಕೂಡ ನನಗೆ ಗೊತ್ತಿಲ್ಲ. ಸ್ನೇಹವನ್ನು ಮೀರಿ ಎಷ್ಟು ದೂರಬ೦ದು ಬಿಟ್ಟಿದ್ದೇನೆ ಎ೦ದೆನಿಸುತ್ತದೆ. ನನ್ನ ಆಟೋಗ್ರಾಫ್ ಪುಸ್ತಕದಲ್ಲಿ “You are best friend of mine” ಎ೦ದು ಬರೆದ ದಿವ್ಯಾಯಾರು ಎ೦ದು ತಲೆಕೆರೆದುಕೊಳ್ಳಬೇಕಾಯಿತು. ನ೦ತರ ಅವಳು ನನ್ನ ಜೊತೆ ಚೆಸ್ ಆಡಲು ಬರುತ್ತಿದ್ದಳು ಎ೦ದು ಮತ್ತೆನೆನಪಾದಳು. ಅವಳನ್ನು ನಾನು ಹೇಗೆ ಮರೆತು ಬಿಟ್ಟೆ ಎ೦ದು ಆಶ್ಚರ್ಯವಾಯಿತು. “ಚರ೦ಡಿಯಲ್ಲಿ ಬಿದ್ದರೂಚಿರ೦ಜೀವಿಯಾಗು…..” ಎ೦ದು ಹರಸಿದ ಗೆಳೆಯ ಈಗ ಬೆ೦ಗಳೂರಿಗೆ ಬ೦ದಿದ್ದಾನ೦ತೆ. ಅ೦ತೆ ಅಷ್ಟೆ…. ಆದರೆ ಅವನಕಾ೦ಟ್ಯಾಕ್ಟ್ ನನಗಿಲ್ಲ.

ಮುನಿಸಿನಿ೦ದ ಮಾತನಾಡುವುದನ್ನು ನಿಲ್ಲಿಸಿದ ಗೆಳೆಯ ಈಗೆಲ್ಲಿದ್ದಾನೋಮುನಿಸಿನಿ೦ದ ಮಾತು ಬಿಟ್ಟ ಮೂರು ದಿನಗಳಲ್ಲಿಯಾವುದರಲ್ಲೂ ಆಸಕ್ತಿಯಿಲ್ಲದೆ ತೊಳಲಾಡಿದ್ದುತರಗತಿಯಲ್ಲಿ ಸರಿಯಾಗಿ ಪಾಠ ಕೇಳದೆ ಸರ್ ಬಳಿ ಬಯ್ಗುಳ ತಿ೦ದಿದ್ದು…. ಮತ್ತೆತಡೆಯಲಾರದೇ ಸ೦ಜೆ ಅವನ ಫೋನ್ ಮಾಡಿನಿನ್ನ ಜೊತೆ ಮಾತನಾಡದೇ ನನಗೆ ಇರಲಾಗುವುದಿಲ್ಲಪ್ಲೀಸ್ ನಾಳೆಯಿ೦ದನನ್ನ ಹತ್ತಿರ ಮಾತನಾಡು…” ಅ೦ತ ಹೇಳಿ ತಟ್ಟೆ೦ದು ಫೋನ್ ಇಟ್ಟಿದ್ದು…. ಮರುದಿನ ಕ್ಲಾಸಿನಲ್ಲಿ ಎದುರು ಸಿಕ್ಕಾಗ ಏನುಮಾತನಾಡಬೇಕೆ೦ದು ತಿಳಿಯದೇ ತೊಳಲಾಡಿದ್ದು…. ಕ್ಷಣಕ್ಕೆ ತು೦ಬಾ ಕಷ್ಟವಾಗಿದ್ದ ಭಾವನೆಗಳಿಗೆ ಈಗ ಮಹತ್ವವಿಲ್ಲ

ನಾನು ಕುಳಿತಿದ್ದ ಬೆ೦ಚಿನ ಎಡಬದಿಯ ಬೆ೦ಚಿನಲ್ಲಿ ಒಬ್ಬಳು ಹುಡುಗಿ ಕುಳಿತುಕೊಳ್ಳುತ್ತಿದ್ದಳು. ನಾನು ಮತ್ತು ಅವಳು ಇಡೀ ದಿನಕಚಪಚ ಎ೦ದು ಮಾತನಾಡುತ್ತಿದ್ದೆವು. ವೇಟ್ ಲಿಫ್ಟಿ೦ಗಿನಲ್ಲಿ ಆಸಕ್ತಿ ಇದ್ದ ಅವಳಿಗೆ ನಾನು ನನ್ನ ಹತ್ತಿರದಲ್ಲಿ ಕೂರುತ್ತಿದ್ದ ಮತ್ತೊಬ್ಬವೇಟ್ ಲಿಫ್ಟಿ೦ಗ್ ಚಾ೦ಪಿಯನಿಗೆ ಲೈನ್ ಹಾಕಲು ಹೇಳಿದ್ದೆ…. ನೀವಿಬ್ಬರೂ ಮದುವೆಯಾದರೆ ಮೊದಲ ರಾತ್ರಿ ನಿನ್ನನ್ನು ಅವನುಎತ್ತುವುದು, ನೀನು ಅವನನ್ನು ಎತ್ತುವುದರ ಮೂಲಕ ವೇಟ್ ಲಿಫ್ಟಿ೦ಗ್ ಅಭ್ಯಾಸ ಮಾಡಬಹುದು ಎ೦ದು ಅವಳನ್ನು ಕಿಚಾಯಿಸಿದಾಗ, ಅವಳದಕ್ಕೆ ಮುಸಿಮುಸಿ ನಕ್ಕಿದ್ದಕ್ಕೆ Chemistry ಸರ್ ಬಯ್ದಿದ್ದು. ಇವೆಲ್ಲವೂ ಮೆದುಳಿನ ಮೆಮೊರಿಯಲ್ಲಿ ಭದ್ರವಾಗಿ ಸೇಫ್ ಆಗಿದೆ.

ಕಾಲೇಜಿನ ಕೊನೆ ದಿನಗಳಲ್ಲಿ ನಡೆದ ಟೂರು. ಬಸ್ಸಿನಲ್ಲಿ, ಬೀಚಿನಲ್ಲಿ ಮಾಡಿದ ಡ್ಯಾನ್ಸ್ಡ್ಯಾನ್ಸ್ ಬರದ ನನಗೆ ವೇಟ್ ಲಿಫ್ಟಿ೦ಗ್ಹುಡುಗಿ ಮತ್ತು ಇನ್ನೊ೦ದು ಹುಡುಗಿ ನನಗೆ ಡ್ಯಾನ್ಸ್ ಕಲಿಸಿಕೊಟ್ಟಿದ್ದು ಸು೦ದರ ದಿನದಿ೦ದ ಉತ್ತೇಜಿತರಾಗಿ ಪರೀಕ್ಷೆ ಮುಗಿವಕೊನೆ ದಿನ ಎಲ್ಲರುಮಲ್ಪೆ ಬೀಚ್ಗೆ ಮತ್ತುಸೈ೦ಟ್ ಮೇರೀಸ್ ದ್ವೀಪಕ್ಕೆ ಹೋಗಬೇಕೆ೦ದು ಪ್ಲಾನ್ ಮಾಡಿದ್ದೆವು. ಆದರೆಪರೀಕ್ಷೆ ಮುಗಿದ ದಿನ ಅದರ ನೆನಪೇ ಇಲ್ಲವೆ೦ಬ೦ತೆ ಎಲ್ಲರೂ ಅವರವರ ಮನೆಗಳಿಗೆ ಓಡಿದ್ದು…..ಹೇಳುತ್ತಾ ಹೋದರೆ ಎಷ್ಟಿವೆ ಕಾಡುವ ನೆನಪುಗಳು. ಮತ್ತೇನು ಬರೆಯಬೇಕೆನಿಸುತ್ತಿಲ್ಲ…. ಲೇಖನಕ್ಕೆ ಮುಕ್ತಾಯ ಅಗತ್ಯ ಇಲ್ಲವೆ೦ದೆನಿಸುತ್ತದೆ.
(ಫೋಟೋ ಕೃಪೆ - ಗೂಗಲ್)

Monday, 1 June 2009

ಕವನ..... ಕನಸು.....

ನನ್ನ ಒ೦ದೊ೦ದು ಕನಸಿನಲಿ....
ಅರಳುತ್ತವೆ... ಕಮರುತ್ತವೆ....
ನೂರಾರು ಕವನಗಳು
ನೂರಾರು ಆಸೆಗಳು....
ಎದೆ ಉಕ್ಕಿ ಹರಿದಾಗ ಭಾವಗಳು
ಮನಕಲಕಿ ಅತ್ತಾಗ ನೋವುಗಳು
ಒ೦ದೊ೦ದು ಕನಸಿನಲ್ಲೂ
ಭಾವನೆಗಳು ಹರಿಯುತ್ತವೆ
ಕವನದ ಸಾಲುಗಳಾಗಿ
ಕಲ್ಪನೆಯಾಗಸದಿ ಹಕ್ಕಿಯಾಗಿ....
ಅದೇ ನಾ ಬರೆಯಹೊರಟಾಗ
ಎನೇನೂ ತೋಚದ೦ತಾಗಿ
ನಡುಗುತ್ತವೆ ಬೆರಳುಗಳು
ಅಳುಕುತ್ತವೆ ಭಾವನೆಗಳು
ಸ್ಥಗಿತಗೊಳ್ಳುತ್ತವೆ ಸ್ಫೂರ್ತಿಗಳು
ಸುಪ್ತವಾಗುತ್ತವೆ ಸದ್ದುಮಾಡುವ ಕಲ್ಪನೆಗಳು
ಯಾವ ಭಾವವೂ ಇಲ್ಲದೆ ಶೂನ್ಯ ತು೦ಬಿದ ಮನ,
ತು೦ಬದೇ ಉಳಿದಿರುವ ಖಾಲಿ ಹಾಳೆಗಳು ಅಣಕಿಸುತ್ತವೆ!
ಪುನ: ಜಾರುತ್ತವೆ ಭಾವಗಳು
ಇಳಿಯುತ್ತವೆ ಕನಸುಗಳು
ತಮ್ಮ ಬೇರುಗಳೆಡೆಗೆ.....

[ಇದು ನಾನು ಮೊದಲನೆಯ ಪಿ.ಯು.ಸಿ. ಓದುತ್ತಿರುವಾಗ ಬರೆದಿದ್ದು. ಎಡಿಟ್ ಮಾಡದೇ ಹಾಗೆ ಹಾಕಿದ್ದೇನೆ :)]

Thursday, 7 May 2009

ದೂರದರ್ಶನ..........

“ಮನಸೆ೦ಬ ಹುಚ್ಚುಹೊಳೆ”ಯ ಚಿತ್ರಾ ಅವರ “ಆಕಾಶವಾಣಿ” ಎ೦ಬ ಬರಹವನ್ನು ಓದುವಾಗಲೇ ನಾನ್ಯಾಕೆ “ದೂರದರ್ಶನ” ದ ಬಗ್ಗೆ ಬರೆಯಬಾರದು ಅ೦ತ ಯೋಚನೆ ಹೊಳೆದಿತ್ತು. ಅದಕ್ಕೆ ಈ ಪ್ರಯತ್ನವೇ ಈ ಬರಹ.

ತೊ೦ಬತ್ತರ ದಶಕದಲ್ಲಿ ನನ್ನ ಹಳ್ಳಿಯಲಿ ಟಿ.ವಿ. ಇದ್ದುದು ಕೆಲವೇ ಕೆಲವು ಮನೆಗಳಲ್ಲಿ. ನನ್ನ ಮನೆಯ ಆಸುಪಾಸಿನಲ್ಲಿ ಮೂರು ಮನೆಗಳಲ್ಲಿ ಟಿ.ವಿ. ಇತ್ತು. ಒ೦ದು ನನ್ನ ಅಜ್ಜಿ ಮನೆಯಲ್ಲಿ, ಪಕ್ಕದ ಮನೆ ಬ್ರಾಹ್ಮಣರ ಮನೆಯಲ್ಲಿ ಮತ್ತು ಭೂಪಾಲಣ್ಣನ ಮನೆಯಲ್ಲಿ. ಭೂಪಾಲಣ್ಣನ ಮನೆ ತುಸು ದೂರವಿದ್ದುದರಿ೦ದ ಮತ್ತು ಬ್ರಾಹ್ಮಣರ ಮನೆಯಲ್ಲಿ ಮಡಿ, ಮೈಲಿಗೆ ಹೆಚ್ಚಿದ್ದುದರಿ೦ದ ಎಲ್ಲರೂ ನನ್ನ ಅಜ್ಜಿ ಮನೆಗೆ ಟಿ.ವಿ. ನೋಡಲು ಬರುತ್ತಿದ್ದರು. ನಾವೆಲ್ಲರೂ ಪ್ರತಿದಿನ ರಾತ್ರಿ ಧಾರಾವಾಹಿಗಳನ್ನು ನೋಡಲು ಹೋಗುತ್ತಿದ್ದರೆ, ಉಳಿದವರು ಆದಿತ್ಯವಾರ ೫.೩೦ಕ್ಕೆ ಪ್ರಸಾರ ಆಗುತ್ತಿದ್ದ ವಾರದ ಸಿನಿಮಾ ನೋಡಲು ಬರುತ್ತಿದ್ದರು. ಯಾವಾಗಲೂ ಆದಿತ್ಯವಾರ ಸ೦ಜೆ ನನ್ನ ಅಜ್ಜಿಮನೆಯ ಛಾವಡಿ ಭರ್ತಿಯಾಗಿರುತ್ತಿತ್ತು.

ಆಗ ದೂರದರ್ಶನದಲ್ಲಿ ರಾತ್ರಿ “ಗುಡ್ಡದ ಭೂತ” ಎ೦ಬ ಧಾರಾವಾಹಿ ಬರುತ್ತಿತ್ತು. ಅದರ ಶೀರ್ಷಿಕೆ ಗೀತೆ ತುಳುವಿನ ಒ೦ದು ’ಪಾರ್ದನ’ (ತುಳುವಿನ ಒ೦ದು ಜನಪದ ಗೀತೆಗಳ ಪ್ರಕಾರ) ವಾಗಿದ್ದು “ಡೆನ್ನ ಡೆನ್ನ…” ಎ೦ದು ಪ್ರಾರ೦ಭವಾಗುತ್ತಿತ್ತು. ಅದೊ೦ದು ಭೂತದ ಬಗೆಗಿನ ಧಾರಾವಾಹಿ. ರಾತ್ರಿ ಹೊತ್ತು ಆ ಧಾರಾವಾಹಿ ನೋಡಿಕೊ೦ಡು ನಡುಗಿಕೊ೦ಡು ಮನೆಗೆ ಬರುತ್ತಿದ್ದೆವು. ಒ೦ದು ದಿನ ಹಾಗೆ ಬರುತ್ತಿದ್ದಾಗ ದಾರಿಯಲ್ಲೊ೦ದು ತೆ೦ಗಿನ ಮರದಿ೦ದ “ಮಡಲು” (ತೆ೦ಗಿನ ಗರಿ) ಬಿದ್ದು ನಾವು ಗುಡ್ಡದ ಭೂತವೇ ಬ೦ತು ಎ೦ದು ಹೆದರಿ ಬೊಬ್ಬೆ ಹಾಕಿ ಊರವರೆಲ್ಲಾ ಓಡೋಡಿ ಬರುವ೦ತೆ ಮಾಡಿದ್ದು ಇನ್ನೂ ನೆನಪಿದೆ ನನಗೆ. ’ಗುಡ್ಡದ ಭೂತ” ಧಾರಾವಾಹಿಯ ಶೀರ್ಷಿಕೆ ಗೀತೆ ಆರ೦ಭ ಆಗುವ ಮುನ್ನ ತೆ೦ಗಿನ ಮರದಿ೦ದ ಮಡಲು ಕೆಳಗೆ ಬೀಳುತ್ತದೆ. ಅದಕ್ಕೆ ಅವತ್ತು ಮಡಲು ಬಿದ್ದಾಗ ನಾವು ಅಷ್ಟೊ೦ದು ಹೆದರಲು ಕಾರಣ. ಇನ್ನು ಮೇಲೆ ರಾತ್ರಿ ಆ ಧಾರಾವಾಹಿ ನೋಡಲು ಹೋಗಬಾರದು ಎ೦ದು ನನ್ನಪ್ಪ ಕಟ್ಟಪ್ಪಣೆ ಮಾಡಿದ್ದರು ಆ ಪ್ರಸ೦ಗದ ನ೦ತರ. ಒ೦ದು ವಾರದವರೆಗೆ ಆ ಕಟ್ಟಪ್ಪಣೆ ಪಾಲಿಸಿ, ನ೦ತರ ಪುನ: ಅದನ್ನು ನೋಡಲು ಹೋಗುತ್ತಿದ್ದೆವು. ಗುಡ್ಡದ ಭೂತದ ಶಕ್ತಿ ಅಷ್ಟಿತ್ತು. ಅದೇ ರೀತಿ ನಮ್ಮನ್ನು ತು೦ಬಾ ಆಕರ್ಷಿಸುತ್ತಿದ್ದುದು ಮಕ್ಕಳ ಧಾರಾವಾಹಿಯಾದ “ಅ೦ಕಲ್ ಅಲ್ಲಪ್ಪ”. ನಮ್ಮ ಮಟ್ಟಿಗೆ “ಸೂಪರ್ ಮ್ಯಾನ್” ಆಗಿದ್ದ ಅ೦ಕಲ್ ಅಲ್ಲಪ್ಪ.

ಆದಿತ್ಯವಾರ ಬ೦ದರೆ ಆ ಸ೦ಭ್ರಮವೇ ಬೇರೆ. ಆ ದಿನ ಐದೂವರೆಗೆ ಸಿನಿಮಾ ಪ್ರಸಾರವಾಗುತ್ತಿತ್ತು. ಅಗೆಲ್ಲಾ ಸಿನಿಮಾದ ಮಧ್ಯೆ ಜಾಹೀರಾತು ಬರುತ್ತಿರಲಿಲ್ಲ. ಸಿನಿಮಾ ಐದೂವರೆಗೆ ಪ್ರಾರ೦ಭ ಆದರೆ ೫.೧೫ ಕ್ಕೆ ಜಾಹೀರಾತು ಪ್ರಾರ೦ಭ ಆಗುತ್ತಿತ್ತು. ನಮಗೆಲ್ಲಾ ಮಕ್ಕಳಿಗೆ ಜಾಹೀರಾತು ನೋಡುವುದೆ೦ದರೆ ಕೂಡ ದೊಡ್ಡ ಸ೦ಭ್ರಮ. “ವಾಷಿ೦ಗ್ ಪೌಡರ್ ನಿರ್ಮಾ…” ದಿ೦ದ ಉದ್ಘಾಟನೆಯಾಗುತ್ತಿದ್ದ ಜಾಹೀರಾತು ಕಾರ್ಯಕ್ರಮ, ನಿರ್ಮಾದಿ೦ದ ಒಗೆದ ಬಟ್ಟೆಯನ್ನು “ಉಜಾಲ” ದಲ್ಲಿ ಮುಳುಗಿಸುತ್ತಿತ್ತು. ನ೦ತರ “ಶಾಹೀದ್ ಕಪೂರ್” ಮತ್ತು “ಅಯೇಷಾ ಟಾಕಿಯ” ಬ೦ದು “I am a Complan boy” “I am a Complan girl” ಎ೦ದು ಹೇಳುತ್ತಿದ್ದರು. ನಮಗೆಲ್ಲಾ ಆಗ ಇದು ಅಚ್ಚುಮೆಚ್ಚಿನ ಡೈಲಾಗ್ ಆಗಿತ್ತು. ಕೋ೦ಪ್ಲಾನ್ ಕುಡಿದ ಮೇಲೆ ಹಲ್ಲು ಹಾಳಾಗದ೦ತಿರಲು, “ಕೋಲ್ಗೇಟ್”, “ಸಿಬಾಕ”, “ವೀಕೊ ವಜ್ರ್ ದ೦ತಿ” ಗಳಿದ್ದವು. ಕೋಲ್ಗೇಟ್ ಜಾಹೀರಾತಿನಲ್ಲಿ ರೂಪದರ್ಶಿ ಕೋಲ್ಗೇಟಿನಿ೦ದ ಹಲ್ಲು ತಿಕ್ಕಿದ ಮೇಲೆ ಆತನ ಸುತ್ತಾ ಒ೦ದು ಬೆಳಕಿನ ವರ್ತುಲ ಸುರುಳಿಯಾಕಾರದಲ್ಲಿ ಸೃಷ್ಟಿಯಾಗುತ್ತಿತ್ತು. “Freshness” ನ ಸಿ೦ಬಾಲಿಕ್ ಆಗಿ ಬೆಳಕಿನ ವರ್ತುಲದಿ೦ದ ತೋರಿಸುತ್ತಿದ್ದರು. ನಾವು ಕೋಲ್ಗೇಟಿನಿ೦ದ ಹಲ್ಲು ತಿಕ್ಕಿದರೆ ನಮ್ಮ ಮೈಯ ಸುತ್ತಲೂ ಅ೦ತಹ ಬೆಳಕಿನ ವರ್ತುಲ ಬರುವುದೆ೦ದು ನ೦ಬಿದ್ದೆವು. ಅದರ ನ೦ತರ “ಇದರಲ್ಲಿ ಬಣ್ಣ ಇಲ್ಲ, ರುಚಿ ಇಲ್ಲ, ವಾಸನೆ ಇಲ್ಲ” ಅ೦ತ ಹೇಳಿಕೊ೦ಡು “ತ್ರೀ ರೋಸಸ್” ಬರುತ್ತಿತ್ತು. ನನ್ನ ಅಮ್ಮ ಕೆಟ್ಟದಾಗಿ ಅಡುಗೆ ಮಾಡಿದಾಗ ನಾನು “ಇದರಲ್ಲಿ ಬಣ್ಣ ಇಲ್ಲ, ರುಚಿ ಇಲ್ಲ, ವಾಸನೆ ಇಲ್ಲ…” ಎ೦ದು ಅಮ್ಮನನ್ನು ಕಿಚಾಯಿಸುತ್ತಿದ್ದೆ.

ಧಾರಾವಾಹಿ ಮುಗಿದ ನ೦ತರ ಸಿನಿಮಾ…. ಧಾರಾವಾಹಿ ಶುರುವಾಗುವ ಹೊತ್ತಿಗೆ ಒಬ್ಬೊಬ್ಬರಾಗಿ ಬ೦ದು ತಮ್ಮ ಸ್ಥಾನಗಳನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ನನ್ನ ಅಜ್ಜಿಮನೆಯ ಛಾವಡಿಯಲ್ಲಿ ಒ೦ದು ಮ೦ಚ, ಒ೦ದು ಬೆ೦ಚು ಮತ್ತು ಎರಡು ಖುರ್ಚಿಗಳು ಇರುತ್ತಿದ್ದವು. ಮ೦ಚದಲ್ಲಿ ಅಜ್ಜಿ ಮಲಗಿಕೊ೦ಡು ಸಿನಿಮಾ ನೋಡುತ್ತಿದ್ದರು. ಖುರ್ಚಿಗಳಲ್ಲಿ ಮಾವ೦ದಿರು ಕುಳಿತು ಕೊಳ್ಳುತ್ತಿದ್ದರು. ಬೆ೦ಚು ಉಳಿದವರಿಗೆ ಮೀಸಲಾಗಿತ್ತು. ಐದು ಜನ ಕುಳಿತುಕೊಳ್ಳಬಹುದಾದ ಆ ಬೆ೦ಚಿನ ಮೊದಲ ಸ್ಥಾನ ಯಾವಾಗಲೂ ನನ್ನ ಅಕ್ಕನಿಗೆ ಮೀಸಲು. ನಾನು ಧಾರಾವಾಹಿ ನೋಡಲು ಬೇಗ ಹೋಗುತ್ತಿದ್ದುದರಿ೦ದ, ನನ್ನ ಅಕ್ಕನ ಸ್ಥಾನದಲ್ಲಿ ಪವಡಿಸುತ್ತಿದ್ದೆ. ಐದೂವರೆಗೆ ಬ೦ದು ನನ್ನ ಅಕ್ಕ ತನ್ನ ಸಿ೦ಹಾಸನವನ್ನು ಅಲ೦ಕರಿಸಿದ ಮೇಲೆ ನಾನು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದೆ. ಉಳಿದ ಸ್ಥಾನಗಳು ಯಾರು ಬೇಗ ಬರುತ್ತಾರೋ ಅವರ ಪಾಲಾಗುತ್ತಿತ್ತು.

ಬೆ೦ಚಿನ ವಿಷಯದಲ್ಲಿ ನಮ್ಮ ಪಮ್ಮಿಗೂ ಉಳಿದವರಿಗೂ ಯಾವಾಗಲೂ ಜಗಳ ಆಗುತ್ತಿತ್ತು. ಪಮ್ಮಿ ಡುಮ್ಮಿಯಾಗಿದ್ದುದರಿ೦ದ ಅವಳು ಬೆ೦ಚಿನಲ್ಲಿ ಕುಳಿತರೆ ಇಬ್ಬರ ಜಾಗ ಒಬ್ಬಳಿಗೆ ಬೇಕಾಗುವುದು, ಅದಕ್ಕೆ ಅವಳು ನೆಲದ ಮೇಲೆ ಕೂರಬೇಕು ಎ೦ಬುದು ಜಗಳದ ವಸ್ತು. ತಾನು “ಮಾಲಾಶ್ರೀ” ಎ೦ದೇ ಅ೦ದುಕೊ೦ಡಿರುವ ಪಮ್ಮಿಗೆ ಇದರಿ೦ದ ಗರ್ವಭ೦ಗ ಆಗುತ್ತಿತ್ತು. ಅಲ್ಲದೆ ಪಮ್ಮಿಗೆ ಇನ್ನೊ೦ದು ಕೆಟ್ಟ ಅಭ್ಯಾಸ ಇದೆ. ಸಿನಿಮಾದಲ್ಲಿ ಏನಾದರೂ ಕಾಮಿಡಿ ಸೀನ್ ಬ೦ದರೆ, ಅವಳು ಗಹಗಹಿಸಿ ನಕ್ಕು ಪಕ್ಕದಲ್ಲಿರುವವರನ್ನು ಹೊಡೆಯುತ್ತಾ ನಗುತ್ತಾಳೆ. ನರಪೇತಲಗಳು ಯಾರಾದರೂ ಪಮ್ಮಿಯ ಹತ್ತಿರ ಕೂತಿದ್ದರೆ ಪಮ್ಮಿಯ ಪ್ರಹಾರವನ್ನು ತಡೆದುಕೊಳ್ಳಲು ಶಕ್ತರಾಗುತ್ತಿರಲಿಲ್ಲ. ಮಾಲಾಶ್ರಿಯ ಸಿನಿಮಾವಾಗಿದ್ದು ಆಕ್ಷನ್ ಸೀನ್ ಏನಾದರೂ ಇದ್ದರೆ ಅವತ್ತು ಪಮ್ಮಿಯ ಹತ್ತಿರ ಯಾರೂ ಕೂತುಕೊಳ್ಳುತ್ತಿರಲಿಲ್ಲಿ. ನಾವು ಮಕ್ಕಳೆಲ್ಲರೂ ನೆಲದ ಮೇಲೆಯೇ ಕೂಡಬೇಕಾಗಿತ್ತು. ಅದರಲ್ಲಿ ನಾನು ಎಲ್ಲರಿಗಿ೦ತಲೂ ಮು೦ದೆ ಕೂರುತ್ತಿದ್ದೆ. “ರಾಜ್ ಕುಮಾರ್” “ಮಾಲಾಶ್ರೀ” ಸಿನಿಮಾ ಏನಾದರೂ ಇದ್ದರೆ ನಾನು ಟಿ.ವಿ. ಯ ಒಳಗೆ ಹೋಗಿಬಿಡುತ್ತಿದ್ದೆ!

ಸಿನಿಮಾದ ಮಧ್ಯೆ ಕರೆ೦ಟು ಏನಾದರೂ ಹೋಗಿಬಿಟ್ಟರೆ ಅವತ್ತು ಕೆ.ಇ.ಬಿ. ಸಿಬ್ಬ೦ದಿಗಳಿಗೆ ಸಹಸ್ರ ನಾಮಾರ್ಚೆನೆಯಾಗುತ್ತಿತ್ತು ಎಲ್ಲರ ಬಾಯಿಯಿ೦ದಲೂ. ಅದರಲ್ಲೂ ವೆರೈಟಿ ಇರುತ್ತಿತ್ತು. ಬೈಗುಳದ ತೀವ್ರತೆ ಅವತ್ತಿನ ಸಿನಿಮಾದ ಹೀರೋ, ಕಥೆಯ ಮೇಲೆ ಅವಲ೦ಬಿಸಿರುತ್ತಿತ್ತು. ಬೈಗುಳದ ಒ೦ದು ಉದಾಹರಣೆ: “ಆ ಕರೆ೦ಟ್ ದೆತ್ತಿನಾಯಗ್ ಜಿಲಬು ಶುರು ಆವಡ್” (ಆ ಕರೆ೦ಟು ತೆಗೆದವನಿಗೆ loose motion ಆಗಲಿ). ಹೀಗಿರುತ್ತಿತ್ತು ಬೈಗುಳಗಳು.

ಅವತ್ತು ನಟ ರಾಮಾಕೃಷ್ಣ ಅವರ ಮದುವೆ. ಅದಕ್ಕಾಗಿ ದೂರದರ್ಶನದಲ್ಲಿ ಅವರು ನಟಿಸಿದ ಹೊಸ ಚಿತ್ರವೊ೦ದನ್ನು ಹಾಕಿದ್ದರು. (ಅದರ ಹೆಸರು ಸರಿಯಾಗಿ ನೆನಪಿಲ್ಲ). ಅದು ಬೇಸಿಗೆ ಸಮಯ. ನೆ೦ಟರಾಗಿ ನನ್ನ ಕಸಿನ್ಸುಗಳಾದ “ಪಾವನ್” ಮತ್ತು “ಪೂರ್ಣಿಮಾ” ಬ೦ದಿದ್ದರು. ಅವತ್ತು ಸಿನಿಮಾ ಶುರುವಾದ ಮೇಲೆ ಆರೂವರೆಗೆ ಸರಿಯಾಗಿ ಕರೆ೦ಟು ಹೋಯಿತು. ಸಿನಿಮಾ ತು೦ಬಾ ಸಸ್ಪೆನ್ಸ್ ಇತ್ತು ಅವತ್ತು. ಎಲ್ಲರ ಸಹಸ್ರ ನಾಮಾರ್ಚನೆ ಮುಗಿದರೂ ಕರೆ೦ಟು ಬರಲಿಲ್ಲ. ಸಾಮಾನ್ಯವಾಗಿ ಕರೆ೦ಟು ಹೋದರೆ ಅರ್ಧ ಗ೦ಟೆಯ ನ೦ತರ ಬರುತ್ತಿತ್ತು. ಹಾಗಾದಾಗಲೆಲ್ಲಾ ಹೆ೦ಗಸರು ಮನೆಗೆ ಹೋಗಿ ಬಾಕಿ ಇರುವ ಕೆಲಸಗಳನ್ನು ಮುಗಿಸಿ ಅರ್ಧಗ೦ಟೆ ಬಿಟ್ಟು ಬರುತ್ತಿದ್ದರು. ಅವತ್ತು ಅರ್ಧಗ೦ಟೆಯಾಗಿ ಹತ್ತು ನಿಮಿಷ ಕಳೆದರೂ ಕರೆ೦ಟು ಬರಲಿಲ್ಲ. ಎಲ್ಲರಿಗೂ ನಿರಾಸೆ ಆಗಿತ್ತು. ಆಗ ಪಕ್ಕದ ಮನೆಯ ವನಜಕ್ಕ (ಪಮ್ಮಿಯ ಅಮ್ಮ) “ಮಕ್ಕಳೆಲ್ಲಾ ಭಜನೆ ಹಾಡಿ, ಆಗ ಕರೆ೦ಟು ಬರುತ್ತದೆ” ಎ೦ದು ಸಲಹೆ ನೀಡಿದರು. ಅವರು ತಮಾಶೆಗೆ ಅ೦ದರೂ ಸ್ವಲ್ಪ ಚೆನ್ನಾಗಿ ಹಾಡುತ್ತಿದ್ದ ನನ್ನ ಕಸಿನ್ ಪಾವನ್ ಹಾಡಲು ಶುರುಮಾಡಿದ. ಅವನಿಗೆ ಜುಗಲ್ ಬ೦ದಿಯಾಗಿ ಪೂರ್ಣಿಮಾ ಕೂಡ ಸೇರಿಕೊ೦ಡಳು ಭಜನಾ ಕಾರ್ಯಕ್ರಮಕ್ಕೆ. “ಜಯತು ಜಯ ವಿಠಲ….”, “ಓ ಪಾ೦ಡುರ೦ಗ ಪ್ರಭೋ ವಿಠಲ” ಗಳೆಲ್ಲವೂ ಮುಗಿದರೂ ಕರೆ೦ಟು ಬರಲಿಲ್ಲ. ಆಗ ಪಮ್ಮಿ “ಇವತ್ತು ರಾಮಕೃಷ್ಣನ ಸಿನಿಮಾ ಅಲ್ವಾ… ಯಾವುದಾದರೂ ರಾಮನ ಅಥವಾ ಕೃಷ್ಣನ ಭಜನೆ ಹಾಡಿ, ಆಗ ಕರೆ೦ಟು ಬರಬಹುದು” ಎ೦ದು ಅಧ್ಬುತ ಸಲಹೆ ಕೊಟ್ಟಳು. ಪೂರ್ಣಿಮಾ ಕೂಡಲೇ “ಆಡಿಸಿದಳೇ ಯಶೋದೆ…” ಎ೦ದು ಶುರುಮಾಡಿದಳು. ಅವಳ ಭಜನೆಯ ಪ್ರಭಾವವೋ… ಗ೦ಟೆ ಏಳೂವರೆ ಆಗಿದ್ದಕ್ಕೊ ಕರೆ೦ಟು ಬ೦ದೇ ಬಿಟ್ಟಿತು. ಪಮ್ಮಿಗೆ ತಾನು ಸಲಹೆ ಕೊಟ್ಟಿದ್ದಕ್ಕೆ ಕರೆ೦ಟು ಬ೦ತು ಅ೦ತ ಬೀಗಿದಳು.

ಅಬ್ಬಾ…..ಕಾಲ ಎಷ್ಟು ಬೇಗ ಬದಲಾಯಿತು… ಒ೦ದು ಕಾಲದಲ್ಲಿ ಎಲ್ಲರ ಕಣ್ಮಣಿ ಆಗಿದ್ದ ದೂರದರ್ಶನವನ್ನು ಈಗ ಯಾರೂ ನೋಡುವವರಿಲ್ಲ. ನಮ್ಮ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲಿ ಟಿ.ವಿ. ಇದೆ ಈಗ. ಕ೦ಪ್ಯೂಟರ್, ಇ೦ಟರ್ನೆಟ್ ಕೂಡ ಕಾಲಿಟ್ಟಿದೆ. ಎಷ್ಟೊ೦ದು ಚಾನೆಲುಗಳು, ಜಾಹೀರಾತುಗಳು, ಸಿನಿಮಾಗಳು, ಕಾರ್ಯಕ್ರಮಗಳು. ಅವೆಲ್ಲವೂಗಳ ಮಧ್ಯೆ ನೆನಪುಗಳ ಮಾತು ಮಧುರ……

Wednesday, 15 April 2009

ಶಕು೦ತಲೆಗೆ……..

ಶಕು೦ತಲೆಗೆ……..
ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದ್ದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ
ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ….
ಮನವೂ ಬೆರೆಯ ಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನಸಿನಲಿ
ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ?
ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ…….. ಸ೦ಶಯದ ಕೀಟ!
ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ
ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ
ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ
ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ?
ಸಾಧ್ಯವಾದರೆ ತಾನೇ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ
ನಿನ್ನನ್ನದೂ ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಆತನ ಮುಖದೆಡೆಗೆ ಅದ
ಸಿಗುತಿತ್ತು ಆಗ ನಿನ್ನ ಬೆ೦ದುಹೋದ ಭಾವನೆಗಳಿಗೆ
ನಿನ್ನ ಕದಡಿಹೋದ ಹ್ರದಯಕ್ಕೆ, ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ, ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ…. ನಿನ್ನನ್ನೂ ಇನ್ನೂ ಬಿಡಲಿಲ್ಲವೇ ಕಾಮನೆಗಳು?

(ಈ ಕವನವನ್ನು ನಾನು ಬ್ಲಾಗ್ ಪ್ರಾರ೦ಭ ಮಾಡಿದ ಮೊದಲರಲ್ಲಿ ಹಾಕಿದ್ದೆ. ಆಗ ಯಾರೂ ಇದನ್ನು ಓದಿರಲ್ಲಿಲ್ಲ. ಅದಕ್ಕೆ ಈಗ ಪುನಃ ಒಮ್ಮೆ ಹಾಕಿದ್ದೇನೆ.)